ಮಾಯಾನಗರಿ ನಾಗರಕಟ್ಟೆ ಸುತ್ತ ರಹಸ್ಯಗಳ ಹುತ್ತ .. ರೇಟಿಂಗ್ : 3/5 ***
Posted date: 16 Sat, Dec 2023 01:17:16 PM
ನಿರ್ದೇಶಕನಾಗಬೇಕೆಂಬ ಕನಸು ಹೊತ್ತ ಯುವಕನ ಜೀವನದ ಏರಿಳಿತಗಳು, ಅದರಲ್ಲಿ ಹುಟ್ಟುವ ಕೌತುಕಗಳೇ ಮಾಯಾನಗರಿ  ಚಿತ್ರದ ಕಥಾವಸ್ತು. ನಿರ್ದೇಶಕನಾಗಬೇಕೆಂಬ ಕನಸು ಭಗ್ನವಾದಾಗ, ನಿರಾಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಜೋಗ ಜಲಪಾತಕ್ಕೆ ಬರುವ ನಾಯಕನ ಸೀನ್ ನಿಂದ ಚಿತ್ರ ಆರಂಭವಾಗುತ್ತದೆ. ಆತ ಸಾಯೋ ನಿರ್ಧಾರಕ್ಕೆ ಬರಲು ಕಾರಣವಾದ ಘಟನೆಗಳು ಮುಂದಿನ ಭಾಗದಲ್ಲಿ ತೆರೆದುಕೊಳ್ಳುತ್ತವೆ. ನಾಯಕ ಶಂಕರ್(ಅನೀಶ್ ತೇಜೇಶ್ವರ್) ನಿರ್ದೇಶಕನಾಗಬೇಕೆಂಬ ಆಸೆಯಿಂದ ಕಥೆ ರೆಡಿ ಮಾಡಿಕೊಂಡು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಅವಕಾಶಕ್ಕಾಗಿ  ಅಲೆದಾಡಿದರೂ ಯಾರೊಬ್ಬ ನಿರ್ಮಾಪಕರೂ ಬಂಡವಾಳ ಹಾಕಲು ಮುಂದೆ ಬರಲ್ಲ. ಕೆಲವರು ಅಶ್ಲೀಲ ಚಿತ್ರ ಮಾಡಿಕೊಡು ಎಂಬ ಆಫರ್ ಕೊಡ್ತಾರೆ. ಶಂಕರ್ ಅದನ್ನು ತಿರಸ್ಕರಿಸುತ್ತಾನೆ. ಆತನ ಎಲ್ಲ ಕಷ್ಟ ಸುಖಗಳಿಗೆ ಇಬ್ಬರು ಸ್ನೇಹಿತರೇ ಆಸರೆ, ಈ  ಶಂಕರ್ ಜೀವನದಲ್ಲೂ ಒಂದು ಲವ್ವಾಗುತ್ತೆ. ಸುಂದರ ಯುವತಿ ವರಲಕ್ಷ್ಮಿ(ತೇಜು) ಆತನ ಗುಣಗಳಿಗೆ ಮನಸೋತು, ದುಂಬಾಲು ಬಿದ್ದು ಲವ್ ಮಾಡುತ್ತಾಳೆ. ಆಕೆಯದೋ ಶ್ರೀಮಂತ ಕುಟುಂಬ.  ಶಂಕರ್, ನಿರುದ್ಯೋಗಿ ಎಂಬ ಕಾರಣಕ್ಕೆ ವರಲಕ್ಷ್ಮಿಯ ತಂದೆ ಅವಮಾನಿಸುತ್ತಾನೆ. ಇದರಿಂದ ಮನನೊಂದ ಶಂಕರ್ ಹೇಗಾದರೂ ಮಾಡಿ ಹೆಸರು, ಕೀರ್ತಿ ಗಳಿಸಲೇಬೇಕೆಂದು  ಕೊನೆಗೂ ಒಬ್ಬ ನಿರ್ಮಾಪಕರನ್ನು ಒಪ್ಪಿಸುತ್ತಾನೆ. ಎಲ್ಲಾ ಆಗಿ ಇನ್ನೇನು ನಾಳೆ ಚಿತ್ರದ ಮುಹೂರ್ತವಿದೆ  ಎನ್ನುವಾಗ ಆ ನಿರ್ಮಾಪಕ  ಕಾಲ್ ಮಾಡಿ ಫೈನಾನ್ಷಿಯರ್ ಕೈಕೊಟ್ಟ ಕಾರಣ  ಚಿತ್ರವನ್ನು ನಿಲ್ಲಿಸಿಬಿಡಿ ಎಂದು ಹೇಳುತ್ತಾನೆ. ಸಿನಿಮಾ ಮುಹೂರ್ತವೇ  ನಿಂತುಹೋದರೆ ತನ್ನ ಮರ್ಯಾದೆ ಹೋಗುತ್ತೆ ಎಂದು ಶಂಕರ್ ನಿರ್ಮಾಪಕರಲ್ಲಿ ವಿನಂತಿಸಿ ಪೂಜೆ ನೆರವೇರಿಸುತ್ತಾನೆ. ಕೊನೆಗೆ ನಿರಾಸೆಯಿಂದ  ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಜೋಗ ಜಲಪಾತಕ್ಕೆ ಬಂದು ಕೆಳಗೆ ಬೀಳುತ್ತಾನೆ. ಆದರೆ ಅರ್ಧದಲ್ಲೇ ಮರವೊಂದಕ್ಕೆ ಸಿಕ್ಕಿ ಹಾಕಿಕೊಳ್ತಾನೆ. ಅದೇ ಸಮಯಕ್ಕೆ ಲೊಕೇಶನ್ ನೋಡಲು ಅಲ್ಲಿಗೆ ಬಂದ ನಿರ್ಮಾಪಕನೊಬ್ಬ(ದ್ವಾರಕೀಶ್) ಕೊಂಬೆಯಲ್ಲಿ ನೇತಾಡುತ್ತಿದ್ದ ಶಂಕರನನ್ನು ರಕ್ಷಿಸುತ್ತಾನೆ. ಈ ಘಟನೆಯಿಂದ  ಶಂಕರನ ಬಾಳಿನಲ್ಲಿ  ಮತ್ತೊಂದು  ಹೊಸ ಅಧ್ಯಾಯ ಶುರುವಾಗುತ್ತದೆ. 
 
ಪತ್ರಿಕೆಯೊಂದರಲ್ಲಿ ಪ್ರಕಟವಾದ ನಾಗರಕಟ್ಟೆ ಎಂಬ ಊರಲ್ಲಿದ್ದ ದೆವ್ವಗಳ ಕಾಟ, ಆ ದೆವ್ವಗಳಿಂದ ನಡೀತಿರೋ ಕೊಲೆಗಳು, ಇದೆಲ್ಲ ಶಂಕರ್‍ಗೆ ವಿಚಿತ್ರವಾಗಿ ಕಾಣುತ್ತದೆ, ಇದರ ಬಗ್ಗೆ ಮಾಹಿತಿ ಹುಡುಕುತ್ತ ಹೋದಂತೆ  ಅನುಮಾನ ಹೆಚ್ಚಾಗುತ್ತದೆ, ಈಗ ಸಿಕ್ಕ ಹೊಸ ನಿರ್ಮಾಪಕ (ದ್ವಾರಕೀಶ್) ಶಂಕರ್‍ಗೆ ಏನಾದರೂ ಹೊಸ ಥರದ ಕಾನ್ಸೆಪ್ಟ್ ಮಾಡಿಕೊಂಡು ಬಾ  ಎಂದಾಗ ಶಂಕರ್ ಇದನ್ನೇ ಇಟ್ಟುಕೊಂಡು ಏಕೆ ಸಿನಿಮಾ ಮಾಡಬಾರದೆಂದು ಯೋಚಿಸುತ್ತಾನೆ, ಕೊನೆಗೆ ಆ ನಾಗರಕಟ್ಟೆ ಎಂಬ ಊರಿನೆಡೆಗೆ ತನ್ನ ಸ್ನೇಹಿತರ ಜೊತೆ ಪಯಣ ಬೆಳೆಸುತ್ತಾನೆ. ಈ ಊರಿಗೆ ಬಂದಾಗ ಇಲ್ಲಿದ್ದ  ಸಿದ್ದಯ್ಯ ಎಂಬ ವ್ಯಕ್ತಿಯ ಇಡಿ ಕುಟುಂಬ ಮನೆ ಮುಂದಿನ ಬಾವಿಗೆ ಬಿದ್ದು ಸೂಸೈಡ್ ಮಾಡಿಕೊಂಡ ವಿಚಾರ ಗೊತ್ತಾಗುತ್ತದೆ, ಆತ್ಮಹತ್ಯೆ ಮಾಡಿಕೊಂಡ ಎಲ್ಲರೂ ಅದೇ ಮನೆಯಲ್ಲಿ ದೆವ್ವಗಳಾಗಿ ಸಂಚರಿಸುತ್ತಿದ್ದಾರೆ, ಅಲ್ಲಿಗೆ ಹೋದವರನ್ನೆಲ್ಲ ಇವರೇ ಕೊಲ್ಲುತ್ತಿದ್ದಾರೆ ಎಂಬುದಾಗಿ  ಸುದ್ದಿ ಹಬ್ಬಿರುತ್ತದೆ, ನಿಜಕ್ಕೂ ಆ ಮನೆಯಲ್ಲಿ ದೆವ್ವಗಳು ನೆಲೆಸಿವೆಯೇ. ಇದರ ಹಿನ್ನೆಲೆ ಪತ್ತೆ ಹಚ್ಚಲು ಹೋದ ಶಂಕರ್ ಹಾಗೂ ಆತನ ಗೆಳೆಯರಿಗೆ ಅಲ್ಲಿ ಕಂಡದ್ದಾದರೂ ಏನು, ಇದಕ್ಕೆಲ್ಲ ಉತ್ತರವನ್ನು ನಿರ್ದೇಶಕರು ಚಿತ್ರದ ಕೊನೇ ೨೦ ನಿಮಿಷಗಳಲ್ಲಿ ಹೇಳಿದ್ದಾರೆ.  ಚಿತ್ರರಂಗದಲ್ಲಿ ತೆರೆಹಿಂದೆ ನಡೆಯುತ್ತಿರುವ ನಗ್ನಸತ್ಯಗಳನ್ನು ನಿರ್ದೇಶಕರು ಇಲ್ಲಿ ತೆರೆದಿಟ್ಟಿದ್ದಾರೆ, ಚಿತ್ರದಲ್ಲಿ ಅವರು ತೋರಿಸಿರುವುದೆಲ್ಲವೂ ನಿಜ, ಪ್ರಾರಂಭದಿಂದ ಅಂತ್ಯದವರೆಗೆ ಚಿತ್ರ ಕುತೂಹಲ ಬೆಳೆಸಿಕೊಂಡೇ ಹೋಗುತ್ತದೆ. ಚಿತ್ರದ ಆರಂಭದಲ್ಲಿ ಒಂದರ ಮೇಲೊಂದರಂತೆ ಬರುವ ಹಾಡುಗಳು ನಂತರ ಕಾಣೆಯಾಗುತ್ತವೆ. ಅದರಲ್ಲಿ ಲಚ್ಚಿ ಲಚ್ಚಿ ಹಾಡು ಸದಾ ಗುನುಗುವಂತಿದೆ, ಅಮರೇಗೌಡನಾಗಿ ಶರತ್ ಲೋಹಿತಾಶ್ವ, ಸಿದ್ದೇಗೌಡನಾಗಿ ಅವಿನಾಶ್, ಆತನ  ಮಗಳು ಮಲ್ಲಿಕಾ ಪಾತ್ರದಲ್ಲಿ ಶ್ರಾವ್ಯರಾವ್ ಎರಡು ಶೇಡ್‍ನಲ್ಲೂ  ಉತ್ತಮ ಅಭಿನಯ ನೀಡಿದ್ದಾರೆ,  
 
ಈವರೆಗೂ ಯಾರೂ ಸಹ ಜೋಗ್ ಜಲಪಾತವನ್ನು ಇಷ್ಟೊಂದು ಭೀಕರವಾಗಿ ತೋರಿಸಿಲ್ಲ. ಶೃಂಗೇರಿ, ಚಿಕ್ಕಮಗಳೂರು, ಹೊನ್ನಾವರದ ಸುಂದರ ಪರಿಸರವನ್ನು ಛಾಯಾಗ್ರಾಹಕ ಶ್ರೀನಿವಾಸ್ ಬಿಗ್ ಸ್ಕ್ರೀನ್ ಮೇಲೆ ಮತ್ತಷ್ಟು ಅಂದವಾಗಿ ಮೂಡಿಸಿದ್ದಾರೆ.  ಅರ್ಜುನ್ ಜನ್ಯ ಸಂಗೀತದ ಹಾಡುಗಳೂ ಕೇಳುವಂತಿವೆ, 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed